20/08/2020
ಕರ್ನಾಟಕ ಕಾಂಗ್ರೆಸ್ ಪಕ್ಷವು ಇಂದು “ಜನಧ್ವನಿ” ಘೋಷಣೆಯಡಿ ಭೂ-ಸುಧಾರಣೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ, ಕೋವಿಡ್-19, ನೆರೆ ಸೇರಿದಂತೆ ಅನೇಕ ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರೂ ಇಲ್ಲ, ಧ್ವನಿಯೂ ಇಲ್ಲವಾಗಿದೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಜನರ ಹಿತ, ಜನಪರ ಯೋಜನೆಗಳನ್ನು ಸರ್ಕಾರ ಜಾರಿಮಾಡುವುದು ಇವರಿಗೆ ಬೇಡವಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ, ವಿರೋಧ ಪಕ್ಷವಾಗಿ ವಿರೋಧಿಸಲೆಂದೇ ಇಂತಹ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಎಲ್ಲರಿಗೂ ಪ್ರತಿಭಟನೆಯನ್ನು ಮಾಡುವ ಹಕ್ಕಿದೆ, ಪ್ರತಿಭಟನೆಯನ್ನು ಮಾಡಲಿ ಆದರೆ ಸುಳ್ಳು ಪ್ರಚಾರವನ್ನು ಮಾಡಿ, ರಾಜ್ಯದ ಜನತೆಯ ಹಾದಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿರುವುದು ಖಂಡನೀಯ.
ರಾಜ್ಯ ಸರ್ಕಾರದ ಜನಪರ ಯೋಜನೆಗಳು, ಕಾನೂನು ತಿದ್ದುಪಡಿಯ ಕುರಿತು ಸ್ಪಷ್ಟನೆ ನೀಡುತ್ತಿದೆ.
1. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ : ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕಾಯ್ದೆಯನ್ನು ನಮ್ಮ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು ಐತಿಹಾಸಿಕ ನಿರ್ಧಾರವಾಗಿದೆ. ರೈತರು, ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಈ ಭೂ-ಸುಧಾರಣೆ ಕಾಯ್ದೆಯ ಸೆಕ್ಷನ್ 79 ಎ ಮತ್ತು ಬಿ ತಿದ್ದುಪಡಿ ಮಾಡಿ ಜಾರಿಗೊಳಿಸಿದೆ. ರೈತರ ಹಿತರಕ್ಷಣೆಗಾಗಿ, ರೈತರಲ್ಲದೇ ಯಾರೂ ಬೇಕಾದರೂ ಕೃಷಿ ಭೂಮಿಯನ್ನು ಖರೀದಿ ಮಾಡಬಹುದಾಗಿದೆ. ಕೃಷಿ ಚಟುವಟಿಕೆಯ ಬೆಳವಣಿಗೆಗೆ, ಕೈಗಾರಿಕೆಗಳ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ.
2. ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ : ರೈತರು ತಾವು ಬೆಳೆದ ಬೆಳೆಗಳನ್ನು, ಉತ್ಪನ್ನಗಳನ್ನು ಮಾರುಕಟ್ಟೆಯ ಹೆಚ್ಚಿನ ದರದಲ್ಲಿ ಯಾರಿಗೆ ಬೇಕಾದರೂ ಮಾರಾಟ ಮಾಡಲು, ರೈತಸ್ನೇಹಿ ಈ ಎ.ಪಿ.ಎಂ.ಸಿ ಕಾಯ್ದೆಗೆ ತಿದ್ದುಪಡಿ ತಂದು “ನನ್ನ ಬೆಳೆ-ನನ್ನ ಹಕ್ಕು” ಜಾರಿಗೊಳಿಸಿದೆ.
3. ಕಾರ್ಮಿಕ ತಿದ್ದುಪಡಿ ಕಾಯ್ದೆ : ರಾಜ್ಯದಲ್ಲಿ ಕಾರ್ಮಿಕರು ಮತ್ತು ಕಾರ್ಖಾನೆ ಮಾಲೀಕರ ನಡುವಿನ ವ್ಯಾಜ್ಯಗಳನ್ನು ಕಡಿಮೆ ಮಾಡಲು ಹಾಗೂ ಸುಗಮ ಆಡಳಿತ ನಡೆಸಲು ಅನುಕೂಲವಾಗುವಂತೆ ಈ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಕೈಗಾರಿಕೆಗಳ ವಿವಾದಗಳ ಅಧಿನಿಯಮ 1947, ಕಾರ್ಖಾನೆಗಳ ಅಧಿನಿಯಮ 1948, ಗುತ್ತಿಗೆ ಕಾರ್ಮಿಕರ ಅಧಿನಿಯಮ 1970 ಕ್ಕೆ ತಿದ್ದುಪಡಿ ಮಾಡಿದೆ. ಕಾರ್ಮಿಕ ಸ್ನೇಹಿ ಹಾಗೂ ಮಾಲೀಕರ ಸ್ನೇಹಿಯಾಗಲು ಈ ತಿದ್ದುಪಡಿ ರಾಜ್ಯ ಸರ್ಕಾರ ಜಾರಿಗೊಳಿಸಿದೆ.
4. ಕೋವಿಡ್ -19 : ಕೋವಿಡ್ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಇಡೀ ದೇಶದಲ್ಲೇ ಮಾದರಿಯಾಗಿ ಪ್ರಥಮವಾಗಿ 2272 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ರಾಜ್ಯದ ಕಾರ್ಮಿಕರು, ಹೂವು, ಹಣ್ಣು, ತರಕಾರಿ ಬೆಳೆದ ರೈತರು, ನೇಕಾರರು, ಟ್ಯಾಕ್ಸಿ ಮತ್ತು ಆಟೋ ಚಾಲಕರು, ಕ್ಷೌರಿಕರು, ಮಡಿವಾಳರು ಮತ್ತು ಚರ್ಮ ಕುಶಲಕರ್ಮಿಗಳಿಗೆ ಪರಿಹಾರ ಒದಗಿಸಲಾಗಿದೆ. ಅಲ್ಲದೇ 42,608 ಆಶಾ ಕಾರ್ಯಕರ್ತೆಯರಿಗೆ 3,000 ರೂ. ಪ್ರೋತ್ಸಾಹಧನ ನೀಡಿದೆ. ಕೋವಿಡ್-19 ಕರ್ತವ್ಯ ನಿರತ ಪೊಲೀಸ್, ವೈದ್ಯರು ಸೇರಿಂದತೆ ಕೊರೋನಾ ವಾರಿಯರ್ಸ್ ಮೃತಪಟ್ಟರೇ 30 ಲಕ್ಷ ರೂ. ವಿಮೆ ಯೋಜನೆ ಜಾರಿಗೆ ತಂದಿದೆ.
ಅದರೂ ಕಾಂಗ್ರೆಸ್ ನಾಯಕರು ಸುಖಾ-ಸುಮ್ಮನೆ ಆಧಾರ ರಹಿತವಾಗಿ ರಾಜ್ಯ ಸರ್ಕಾರ ಕೋವಿಡ್-19 ನಲ್ಲಿ 4167 ಕೋಟಿ ರೂ ಖರ್ಚು ಮಾಡಿ, ಇದರಲ್ಲಿ 2000 ಕೋಟಿ ರೂ. ಭ್ರಷ್ಟಾಚಾರವೆಸಗಿದೆ ಎಂದು ಆರೋಪಿಸಿದೆ. ಆದರೆ ರಾಜ್ಯ ಸರ್ಕಾರದ 5 ಇಲಾಖೆಗಳ ಸಚಿವರು ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಕೇವಲ 2118 ಕೋಟಿ ಮಾತ್ರ ಎಂದು ಸ್ಪಷ್ಟನೆ ನೀಡಿದ್ದರೂ, ವಿರೋಧ ಪಕ್ಷವಾದ ಕಾಂಗ್ರೆಸ್ ಮಾತ್ರ ತನ್ನ ಜವಾಬ್ದಾರಿಯನ್ನು ಮರೆತು, ರಾಜ್ಯದ ಜನತೆಯ ಹಾದಿ ತಪ್ಪಿಸುವ , ಸುಳ್ಳು ಸುದ್ದಿಯನ್ನು ಹಬ್ಬಿಸುವುದೇ ಇವರ ಕಾಯಕವಾಗಿದೆ.
5. ನೆರೆ ಹಾವಳಿ: ಪ್ರವಾಹ ಮತ್ತು ಅತಿವೃಷ್ಟಿಯ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಶ್ರಮಿಸುತ್ತಿದೆ. ರಾಜ್ಯದ ಅತಿಷೃಷ್ಟಿಯಿಂದ ಹಾನಿಗೊಳಗಾದ ಹಾಗೂ ಪ್ರವಾಹ ಪೀಡಿತ ಜಿಲ್ಲೆಗಳಾದ ಕೊಡಗು, ಉತ್ತರ ಕನ್ನಡ, ಬೆಳಗಾವಿ, ಗದಗ, ಉಡುಪಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಅಲ್ಲಿನ ಸ್ಥಳೀಯ ಜಿಲ್ಲಾಡಳಿತ ಸ್ಪಂದಿಸಿ ಜನರ ರಕ್ಷಣೆ, ಜಾನುವರಗಳ ರಕ್ಷಣೆ ಸೇರಿದಂತೆ ಅನೇಕ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. ಕಂದಾಯ ಸಚಿವರು, ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಪ್ರವಾಸವನ್ನು ಮಾಡಿ, ಅಲ್ಲಿನ ಪರಿಹಾರ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಪ್ರವಾಹದಿಂದ, ಅತಿವೃಷ್ಟಿಯಿಂದ ರಾಜ್ಯಕ್ಕೆ ಹಾನಿಯಾಗಿರುವ ಕುರಿತು ಮಾನ್ಯ ಪ್ರಧಾನಮಂತ್ರಿಯವರೊಂದಿಗೆ ಚರ್ಚಿಸಿ ರಾಜ್ಯಕ್ಕೆ ಸಿಗಬೇಕಾದ ಅಗತ್ಯ ನೆರವಿನ ಸಹಾಯಕ್ಕೆ ಮನವಿಯನ್ನು ಮಾಡಿದ್ದಾರೆ.
ಕೋವಿಡ್-19, ನೆರೆಯ ಸಂಕಷ್ಟದ ನಡುವೆಯೂ, ರಾಜ್ಯ ಸರ್ಕಾರ ರಾಜ್ಯದ ಆರ್ಥಿಕ ಚೇತರಿಕೆ ಕ್ರಮ ಕೈಗೊಂಡು, ರಾಜ್ಯದ ಅನೇಕ ಜನಪರ ಯೋಜನೆಗಳು, ಜನಸ್ನೇಹಿ ಆಡಳಿತವನ್ನು ಯಶಸ್ವಿಯಾಗಿ ನೀಡುತ್ತಿದ್ದರೂ ಕಾಂಗ್ರೆಸ್ ಮಾತ್ರ ತನ್ನ ರಾಜಕೀಯ ಲಾಭಕ್ಕಾಗಿ, ರಾಜ್ಯದ ಜನತೆಯ ಹಾದಿ ತಪ್ಪಿಸುವ ಕಾರ್ಯ ಮಾಡುತ್ತಿರುವುದು ಖಂಡನೀಯವಾಗಿದೆ.