17/07/2022
ಶಬ್ದ ಸೋಪಾನ
ಭಾರತವು ಅನುಭಾವಿಗಳ ದೇಶ, ಇಲ್ಲಿಯ ಜನರು ಸರಳ, ಸುಂದರ, ಸಾತ್ವಿಕ ಜೀವನ ಸಾಗಿಸಿದವರು. ಅವರ ನಡೆ ನೇರ, ಭಾವ ಮಧುರ, ಬುದ್ಧಿ ಶುದ್ಧ. ಅಂಥ ಮಹಾನುಭಾವಿಗಳು ಬದುಕಿದ ದೇಶದಲ್ಲಿ ನಾವೂ ಬದುಕುತ್ತಿದ್ದೇವೆ ಎನ್ನುವುದೇ ಒಂದು ಹೆಮ್ಮೆಯ ವಿಷಯ, ಸದಭಿಮಾನದ ಸಂಗತಿ. ಬಹಿರಂಗದಲ್ಲಿರುವ ಪ್ರಾಪಂಚಿಕ ವಸ್ತುಗಳು ಎಷ್ಟು ಮುಖ್ಯವೋ, ಅಷ್ಟೇ ನಮ್ಮ ಅಂತರಂಗದಲ್ಲಿರುವ ಪರವಸ್ತು, ಪರಮಸತ್ಯ, ಪರಮಶಾಂತಿಯೂ ಮುಖ್ಯ ಅದನ್ನು ಪಡೆಯುವ ಪದ್ಧತಿಯನ್ನು ಹೇಳಿಕೊಡುವವರು, ಮಾರ್ಗದರ್ಶನ ಮಾಡುವವರೇ ಋಷಿ ಮುನಿಗಳು, ಸಂತರು-ಶರಣರು, ಅವರ ಅನುಭಾವದ ನುಡಿಗಳನ್ನು ನಾವು ಕೇಳಬೇಕು. ಎಷ್ಟು ದಿವಸ, ಎಷ್ಟು ತಿಂಗಳು, ಎಷ್ಟು ವರುಷ ಕೇಳಬೇಕು ಎಂದು ನಾವು ವಿಚಾರಿಸಬಾರದು. ಬದುಕಿರುವವರೆಗೂ ನಾವು ಒಳ್ಳೆಯ ಮಾತುಗಳನ್ನು ಕೇಳುತ್ತಿರಬೇಕು.
ಜ್ಞಾನವು ಶಬ್ದವಾಗಿ ಕಿವಿಗಳ ಮೂಲಕ ನಮ್ಮೊಳಗೆ ಪ್ರವೇಶಿಸುತ್ತದೆ. ರೂಪವಾಗಿ ಕಣ್ಣುಗಳ ಮೂಲಕ ನಮ್ಮ ಒಳಗೆ ಪ್ರವೇಶಿಸುತ್ತದೆ. ನಾವು ಏನನ್ನೂ ಕೇಳದಿದ್ದರೆ, ನೋಡದಿದ್ದರೆ, ಜ್ಞಾನಗಂಗೆಯು ನಮ್ಮೊಳಗೆ ಪ್ರವೇಶಿಸುವುದಾದರೂ ಹೇಗೆ? ಕಣ್ಣು, ಕಿವಿ, ಮೂಗು, ನಾಲಿಗೆ, ತ್ವಚೆ ಈ ಜ್ಞಾನೇಂದ್ರಿಯಗಳನ್ನೇ ಬಳಸದಿದ್ದರೆ ಹೇಗೆ? ಅದರಿಂದ ಜ್ಞಾನದ ದ್ವಾರವೇ ಮುಚ್ಚಿ ಹೋಗಿ ನಾವು ಕತ್ತಲೆಯಲ್ಲಿ ಬಾಳಬೇಕಾದೀತು. ಆಗ ನಾವು ಎಲ್ಲಿ ಹೆಜ್ಜೆ ಇಡಬೇಕು ಎಲ್ಲಿ ಹೆಜ್ಜೆ ಇಡಬಾರದು ಎಂಬುದು ತಿಳಿಯದಂತಾಗಿ ಜೀವನದಲ್ಲಿ ಬೀಳುವ ಏಳುವ ಪ್ರಸಂಗ ಬರಬಹುದು. ಇಂಥ ಪ್ರಸಂಗದಲ್ಲಿ ಅನುಭಾವಿಗಳ ನುಡಿಯು ಜ್ಞಾನದೀವಿಗೆಯಾಗಿ ನಮಗೆ ದಾರಿತೋರಿಸುತ್ತದೆ. ಅಂಥ ಮಹಾತ್ಮರ ನುಡಿಗಳನ್ನು ನಾವು ನಿತ್ಯ ನಿರಂತರ ಕೇಳುತ್ತಿರಬೇಕು. ಆ ಕುರಿತು ಅನುಭಾವಿ ಕವಿ ಸೋಮೇಶ್ವರರು ಹೇಳುತ್ತಾರೆ
ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ। ಕೆಲವಂ ಮಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತಂ। ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ| ಪಲವುಂ ಪಳ್ಳ ಸಮುದ್ರವೈ ಹರಹರ ಶ್ರೀ ಚೆನ್ನಸೋಮೇಶ್ವರಾ||
ಬಲ್ಲವರ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸುವುದು, ಶಾಸ್ತ್ರಗಳನ್ನು ಶ್ರದ್ಧೆಯಿಂದ ಕೇಳುವುದು, ಸತ್ಕಾರ್ಯಗಳ ಮಾಡುವವರನ್ನು ನೋಡುವುದು, ನಾವೇ ನಮ್ಮ ಅಂತರಂಗದಲ್ಲಿ ಇರುವ ಜ್ಞಾನದ ಕಣ್ಣನ್ನು ತೆರೆದು ತಿಳಿಯುವುದು, ಸಜ್ಜನರ ಸಂಗದಲ್ಲಿ ಇದ್ದು ಅನುಭವಿಸುವುದು ಇವೇ ಜ್ಞಾನಾರ್ಜನೆಯ ಐದು ಸುಲಭೋಪಾಯಗಳು.
ಈ ಪ್ರಪಂಚದಲ್ಲಿ ಒಳ್ಳೆಯ ಜೀವನವನ್ನು ಸಾಗಿಸಿದವರು, ಜೀವನದ ಬಟ್ಟೆಯು ಒಂದಿಷ್ಟೂ ಕೊಳೆಯಾಗದಂತೆ ಬದುಕಿದವರು ಸಾಕಷ್ಟು ಜನರಿದ್ದಾರೆ. ಅವರು ಜ್ಞಾನದ ದೀವಿಗೆಯನ್ನು ಬೆಳಗಿಸಿ ಅಜ್ಞಾನದ ಕತ್ತಲೆಯನ್ನು ಕಳೆದರು. ಒಲವಿನ ಮರವನ್ನು ನೆಟ್ಟು ವಾತ್ಸಲ್ಯದ ಹಣ್ಣನ್ನು ಹಂಚಿದರು. ಅಂಥ ಪುಣ್ಯಾತ್ಮರಿಂದ ನಾವು ಬದುಕುವುದನ್ನು ಕಲಿಯದಿದ್ದರೆ ಇನ್ನಾರಿಂದ ಕಲಿಯುವುದು? ದ್ವೈತವೋ, ಅದ್ವೈತವೋ ಒಳ್ಳೆಯದನ್ನು ಹೇಳುವ ಶಾಸ್ತ್ರ ಯಾವುದೇ ಇರಲಿ ಅದನ್ನು ಅಷ್ಟೇ ಆಸಕ್ತಿಯಿಂದ ನಾವು ಕೇಳಬೇಕು. ಪಣತೆ ಯಾವುದಾದರೇನು ಬೆಳಕು ಒಂದೇ, ಶಾಸ್ತ್ರಗ್ರಂಥ ಯಾವುದಾದರೇನು ಅದರಲ್ಲಿರುವ ಅರಿವಿನ ಬೆಳಕು ಒಂದೇ! ಅಂಥ ಸುಜ್ಞಾನದ ಬೆಳಕು ನಮ್ಮೊಳಗೂ ಇದೆ. ಅದನ್ನು ವಿವೇಕ ಅಥವಾ ಅಂತರ್ವಾಣಿ ಎನ್ನುತ್ತಾರೆ. ದಾರಿಯಲ್ಲಿ ಬಿದ್ದಿರುವ ಯಾರದೋ ಹಣವನ್ನೋ, ಹಣ್ಣನ್ನೋ ಕಂಡಾಗ, ಅದನ್ನು ಎತ್ತಿಕೊಳ್ಳಬೇಕೆಂದು ನಮ್ಮ ಮನಸ್ಸು ಹೇಳುತ್ತದೆ. ಇದೇ ಸಮಯಕ್ಕೆ 'ಇದು ಅನ್ಯರ ಹಣ, ಇದನ್ನು ಎತ್ತಿಕೊಳ್ಳುವುದು ಎಂದೆಂದಿಗೂ ಒಳ್ಳೆಯದಲ್ಲ' ಎಂದು ನಮ್ಮ ಅಂತರ್ವಾಣಿಯು ಮೆಲ್ಲನೆ ಸವಿನುಡಿಯುತ್ತದೆ. ಅದನ್ನು ಕೇಳಿ ಹಾಗೆ ನಡೆದುಕೊಳ್ಳುವುದೇ ಸುಜ್ಞಾನ!
ಓರ್ವ ವಿದೇಶದ ತತ್ತ್ವಜ್ಞಾನಿ 'ಜ್ಞಾನವೇ ನೀತಿ' ಎಂದಿದ್ದಾನೆ. ನೀತಿಯು ನಾವು ನಡೆಯುವ ದಾರಿಯಾದರೆ, ಜ್ಞಾನವು ನಾವು ನಡೆಯುವ ದಾರಿಯನ್ನು ತೋರುವ ದಾರಿದೀಪವಾಗಿದೆ. ಉಡಿಗೆ-ತೊಡಿಗೆಗಳಿಂದ ನಾವು ಬಹಿರಂಗವನ್ನು ಅಲಂಕರಿಸಿ ಆನಂದಿಸುತ್ತೇವೆ. ಹಾಗೇ ನಾವು ಸದ್ಗುಣ ಸತ್ಕಾರ್ಯಗಳಿಂದ ನಮ್ಮ ಅಂತರಂಗವನ್ನು ಅಲಂಕರಿಸಬೇಕು. ಅದರಿಂದ ನಮಗೆ ಶಾಶ್ವತವಾಗಿ ಸುಖ ಸಂತೋಷ ದೊರೆಯುತ್ತದೆ. ಅಂಥ ಆದರ್ಶ ಬದುಕು ನಮ್ಮದಾಗಬೇಕಾದರೆ ನಾವು ಬಲ್ಲವರ ಮಾತುಗಳನ್ನು ಒಲಿದಾಲಿಸಲೇಬೇಕು. ಆ ಕುರಿತು ಮಹಾನುಭಾವಿ ಚನ್ನಬಸವಣ್ಣನವರು ಹೀಗೆ ಹೇಳುತ್ತಾರೆ.
ಪಾತಾಳದಗ್ಧವಣಿಯ ನೇಣಿಲ್ಲದೆ ಸೋಪಾನದ ಬಲದಿಂದಲ್ಲದೆ
ತೆಗೆಯಬಹುದೇ? ಶಬ್ದಸೋಪಾನವ ಕಟ್ಟಿ
ನಡೆಸಿದರು ನಮ್ಮ ಪುರಾತನರು ದೇವಲೋಕಕ್ಕೆ ಬಟ್ಟೆ ಕಾಣಿರೋ, ಮರ್ತ್ಯ ಲೋಕದವರ ಮನದ ಮೈಲಿಗೆಯ ಕಳೆಯಲೆಂದು ಗೀತಮಾತೆಂಬ ಜ್ಯೋತಿಯ ಬೆಳಗಿ ಕೊಟ್ಟರು ಕೂಡಲಚನ್ನಸಂಗನ ಶರಣರು.
ಒಂದು ಆಳವಾದ ಬಾವಿ, ಅದರಲ್ಲಿ ಸವಿ ಸವಿಯಾದ ನೀರು. ಆದರೆ ಅದಕ್ಕೆ ಇಳಿಯುವ ಮೆಟ್ಟಿಲುಗಳೂ ಇಲ್ಲ. ಅದರಲ್ಲಿರುವ ನೀರನ್ನು ಎಳೆಯುವ ಹಗ್ಗವೂ ಅಲ್ಲಿಲ್ಲ. ಹಾಗಾದರೆ ಆ ನೀರು ನಮ್ಮ ದಾಹವನ್ನು ಬಾಯಾರಿಕೆಯನ್ನು ಕಳೆಯುವುದಾದರೂ ಹೇಗೆ? ಈ ಸತ್ಯಂ ಶಿವಂ ಸುಂದರಂ ಸೃಷ್ಟಿಯೇ ಆಳವಾದ ಬಾವಿ ಇದರಲ್ಲಿ ಪರಮಾನಂದದ ಜಲವು ತುಂಬಿ ತುಳುಕುತ್ತಿದೆ. ಆದರೆ ಅದನ್ನು ಪಡೆಯುವುದಕ್ಕೆ ಯಾವುದಾದರೊಂದು ಸಾಧನ ಇರಲೇಬೇಕು. ಅದುವೇ ನಮ್ಮ ಪುರಾತನರು, ಋಷಿಮುನಿಗಳು, ಸಂತರು-ಶರಣರು ಕರುಣಿಸಿರುವ 'ಶಬ್ದ ಸೋಪಾನ' ಅವರ ಅನುಭಾವದ ನುಡಿಗಳನ್ನು ಕೇಳಿದರೆ ಸಾಕು ನಮಗೆ ಪರಮಾನಂದದ ಜಲ ದೊರೆಯುತ್ತದೆ. ಪ್ರಪಂಚದ ತಾಪತ್ರಯಗಳೆಲ್ಲ ಕಳೆದುಹೋಗಿ ಜೀವನದಲ್ಲಿ ಪರಮಶಾಂತಿಯು ನೆಲೆಸುತ್ತದೆ.
ನಮ್ಮ ಋಷಿಮುನಿಗಳು ಕೂಡಾ “ಸ್ವಾಧ್ಯಾಯ ಪ್ರವಚನಾಭ್ಯಾಂ ಮಾ ಪ್ರಮದಿತ ವ್ಯಂ”(ತೈ.-೧೧) ಎಂದು ಹೇಳಿದರು. ಮಹಾತ್ಮರ ಉಪದೇಶಾಮೃತವನ್ನು ಕೇಳುವುದನ್ನು ಓದುವುದನ್ನು ನಾವು ಎಂದೂ ಬಿಡಬಾರದು. ಒಳ್ಳೆಯ ಮಾತುಗಳನ್ನು ಹೇಳುವವರಲ್ಲಿ ಹಿರಿಯರು, ಕಿರಿಯರು ಎಂದು ಭೇದ ಮಾಡಬಾರದು. “ಬಾಲಾದಪಿ ಸುಭಾಷಿತಂ ಗ್ರಾಹ್ಯಂ” ಒಳ್ಳೆಯದನ್ನು ಹೇಳುವವರು ಬಾಲಕರಾದರೂ ಅವರ ಮಾತನ್ನು ಕೇಳಲೇಬೇಕು. 'ದಯವಿಟ್ಟು ಸೆರೆಯನ್ನು ಕುಡಿಯಬೇಡಿರಿ ಎಂದು ಸತಿಯು ಪತಿಗೆ ಹೇಳಿದರೆ, ಅದನ್ನು ಪತಿಯು ಕೇಳಿದರೆ ತಪ್ಪೇನಿದೆ. ನಾವು ಕಲಿಯಲು ಸಿದ್ಧವಾದರೆ ಸಮಸ್ತ ಪ್ರಪಂಚವೇ ನಮಗೆ ಗುರುವಾಗಿ ನಿಂತು ಕಲಿಸುತ್ತದೆ.
ಒಂದು ಊರಿನಲ್ಲಿ ಒಬ್ಬ ಕುಡುಕ. ಅವನು ರಾತ್ರಿಯೆಲ್ಲಾ ಸೆರೆ ಕುಡಿದು ಎಲ್ಲೋ ಬೀಳುತ್ತಿದ್ದ. ಹಗಲಿನಲ್ಲಿ ಮಾತ್ರ ತಾನು ಕುಡಿದು ಖಾಲಿಮಾಡಿದ ಬಾಟಲಿ ಕೈಯಲ್ಲಿ ಹಿಡಿದು- “ನೀವು ಯಾರೂ ಕುಡಿಯಬೇಡಿ; ಕುಡಿದರೆ ನನ್ನಂತೆ ಮನೆ, ಮಡದಿ, ಮಕ್ಕಳು ಎಲ್ಲಾ ಬಿಟ್ಟು ಮಾನಗೇಡಿಯಾಗಿ ದಾರಿಯಲ್ಲಿ ಬಿದ್ದಿರಬೇಕಾಗುತ್ತದೆ” ಎಂದು ಹೇಳುತ್ತಿದ್ದ. ಮೊದಲು ಮೊದಲು ಇವನೇನು ಹೇಳುತ್ತಾನೆ ಇವನೊಬ್ಬ ಕುಡುಕ ಎಂದು ಜನ ಅವನ ಮಾತನ್ನು ಕೇಳಿಸಿಕೊಳ್ಳಲಿಲ್ಲ. ಅವನು ಮಾತ್ರ ನಿರಂತರ ಹಾಗೆ ಹೇಳುತ್ತಲೇ ಇದ್ದ. ಮುಂದೆ ಮುಂದೆ ಅವನ ಅಂತರಂಗದಿಂದ ಹೊರಟ ಆ ಮಾತು ಎಲ್ಲರ ಹೃದಯವನ್ನು ತಟ್ಟಿತು. ಮನಸ್ಸು ಮುಟ್ಟಿತು. ಎಲ್ಲರೂ ಕುಡಿಯುವುದನ್ನು ಬಿಟ್ಟರು. ಒಂದು ದಿನ ಆ ಊರಿನಲ್ಲಿ ಒಬ್ಬರೂ ಕುಡುಕರು ಇಲ್ಲದಂತಾಗಿ ಅದು ಆದರ್ಶ ಗ್ರಾಮವಾಗಿತ್ತು!! ಒಬ್ಬ ಸಾಮಾನ್ಯ ಮನುಷ್ಯನ ಅಂತಃಕರಣದ ನುಡಿಯೇ ಇಷ್ಟೊಂದು ಪ್ರಭಾವಶಾಲಿಯಾಗಿರುವಾಗ, ಆ ಮಹಾತ್ಮರ ನುಡಿಯಶಕ್ತಿ ಎಷ್ಟೆಂದು ಹೇಳುವುದು? ಅದು ಅವರ್ಣನೀಯ! ಅದ್ವಿತೀಯ ಆ ಮಹಾತ್ಮರ ನುಡಿ ಅಥವಾ ಶಬ್ದವೇ ನಮ್ಮ ಅಂತರಂಗದಲ್ಲಿರುವ ಸುಧಾಸಾಗರಕ್ಕೆ, ಶಾಂತಿ ಸಾಮ್ರಾಜ್ಯಕ್ಕೆ ನಮ್ಮನ್ನು ತಲುಪಿಸುವ ಶಬ್ದ ಸೋಪಾನ!
ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳವರ ಪ್ರವಚನಗಳು
ಪುಸ್ತಕ: ಸದಾಚಾರ
ಸಂಪಾದನೆ: ಡಾ. ಶ್ರದ್ಧಾನಂದ ಸ್ವಾಮಿಗಳು
©ಜ್ಞಾನಯೋಗ ಫೌಂಡೇಶನ್, ವಿಜಯಪುರ
To Donate: http://jnanayogashrama.org/mdsmall/donate.php
To buy book: http://jnanayogashrama.org/mdsmall/viewbooks.php?param=33