30/08/2015
My Article in Mangaloretips.com
ಜೀವವೈವಿಧ್ಯಕ್ಕೆ ಕುತ್ತು ತರುವ ಎತ್ತಿನಹೊಳೆ ಯೋಜನೆ
ಬಣ್ಣದ ಭರವಸೆಗಳ ಆಶಾಗೋಪುರ ನಿರ್ಮಿಸುವಲ್ಲಿ ನಮ್ಮ ರಾಜಕಾರಣಿಗಳು ನಿಸ್ಸೀಮರು. ಅವೈಜ್ಞಾನಿಕ, ಕಾರ್ಯಸಾಧುವಲ್ಲದ, ಪ್ರಕೃತಿ ವಿರೋಧಿ ಯೋಜನೆಗಳನ್ನು ಕಾಗದಗಳಲ್ಲಷ್ಟೇ ತೋರಿಸಿ, ಜನರನ್ನು ನಂಬಿಸಿ ವಂಚಿಸುವ ಹುನ್ನಾರ ನಿರಂತರವಾಗಿ ನಡೆದುಬಂದಿದೆ. ಇಂಥ ರಾಜಕೀಯ ಲಾಭಕ್ಕಾಗಿ ಹುಟ್ಟಿಕೊಂಡ ಕೂಸು ಎತ್ತಿನಹೊಳೆ ಯೋಜನೆ. ನೇತ್ರಾವತಿ ತಿರುವು ಯೋಜನೆ ಎಂಬ ಅಸಂಬದ್ಧ ಯೋಜನೆಗೆ ಕರಾವಳಿ ಪ್ರದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆಸರು ಬದಲಿಸಿ ಜಾರಿಗೊಳಿಸುವ ಪ್ರಯತ್ನವೇ ಹೊಸ ಕಲ್ಪನಾಕೂಸು ಎತ್ತಿನಹೊಳೆ ಯೋಜನೆ. ದಕ್ಷಿಣ ಕನ್ನಡ ಮೂಲದ ರಾಜಕಾರಣಿ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿದ್ದಕ್ಕೂ, ಎತ್ತಿನಹೊಳೆ ಯೋಜನೆಗೂ ಸಂಬಂಧವಿದೆ. ಬಯಲುಸೀಮೆಯ ಶಾಶ್ವತಬರಪೀಡಿತ ಪ್ರದೇಶಗಳ ಜನತೆಗೆ ಅಂಗೈಯಲ್ಲಿ ಅರಮನೆ ತೋರಿಸಿ, ಮತ ಕೀಳುವ ಹುನ್ನಾರ ಎನ್ನದೇ ವಿಧಿಯಿಲ್ಲ.
ನಮ್ಮಲ್ಲಿ ಯಾವ ಬೃಹತ್ ನೀರಾವರಿ ಯೋಜನೆಗಳು ಯಶಸ್ವಿಯಾಗಿವೆ ಎಂಬುದನ್ನು ವಿಶ್ಲೇಷಿಸಿದರೆ, ಇಂಥ ಯೋಜನೆಗಳ ಹಿಂದಿನ ನೈಜ ಬಂಡವಾಳ ಬಹಿರಂಗವಾಗುತ್ತದೆ. ರಾಜಕಾರಣಿಗಳು, ಗುತ್ತಿಗೆದಾರರು ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಯ ಅನೈತಿಕ ಕೂಸು ಇಂಥ ಬೃಹತ್ ನೀರಾವರಿ ಯೋಜನೆಗಳು. ಕೃಷ್ಣಾ, ತುಂಗಭದ್ರಾ, ಕಾವೇರಿ, ಕಬಿನಿ ಹೀಗೆ ಯಾವ ಯೋಜನೆಗಳನ್ನು ತೆಗೆದುಕೊಂಡರೂ ಮೇಲಿನ ಮಾತು ಅನ್ವಯಿಸುತ್ತದೆ. ಪರಿಸರಕ್ಕೆ ಹಾನಿ ಮಾಡುವ, ಬಹಳಷ್ಟು ವೆಚ್ಚದಾಯಕ, ಸಾವಿರಾರು ಕುಟುಂಬಗಳ ಜಮೀನು- ಅನ್ನ ಕಸಿಯುವ ಇಂಥ ದೊಡ್ಡ ಯೋಜನೆಗಳ ಬದಲಾಗಿ ಮಳೆನೀರು ಕೊಯ್ಲು, ತಡೆ ಅಣೆ ನಿರ್ಮಾಣ, ಜಲಾನಯನ ಅಭಿವೃದ್ಧಿಯಂಥ ಯೋಜನೆಗಳಿಗೆ ಸರ್ಕಾರ ಏಕೆ ಆದ್ಯತೆ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.
ಉದಾಹರಣೆಗೆ ಉತ್ತರ ಕರ್ನಾಟಕದ ಜೀವನಾಧಾರವಾದ ಆಲಮಟ್ಟಿ ಯೋಜನೆಯನ್ನೇ ತೆರೆದುಕೊಳ್ಳೋಣ. ಮೂಲಯೋಜನೆ ೧೯೬೩ರಲ್ಲಿ ಪೂರ್ಣಗೊಳ್ಳಬೇಕಿತ್ತು. ಇದರ ಅಂದಾಜು ವೆಚ್ಚ ಆಗ ೬೦ ಲಕ್ಷ ರೂಪಾಯಿ. ಆದರೆ ಯೋಜನೆ ಪೂರ್ಣಗೊಂಡದ್ದು ೨೦೦೪ರಲ್ಲಿ. ತಗುಲಿದ ಒಟ್ಟು ವೆಚ್ಚ ಸುಮಾರು ಹತ್ತು ಸಾವಿರ ಕೋಟಿ. ಇದು ನಮ್ಮ ಬೃಹತ್ ನೀರಾವರಿ ಯೋಜನೆಗಳ ವಾಸ್ತವ ಚಿತ್ರಣ. ಇಂಥ ಮತ್ತೊಂದು ಯೋಜನೆ ನಮಗೆ ಬೇಕೇ ಎನ್ನುವುದು ರಾಜ್ಯದ ಮುಂದಿರುವ ಪ್ರಶ್ನೆ. ಎತ್ತಿನಹೊಳೆ ಯೋಜನೆಯ ಅಂದಾಜು ವೆಚ್ಚ ೧೨ ಸಾವಿರ ಕೋಟಿ ರೂಪಾಯಿ. ಅಂದರೆ ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ಅದು ಎಷ್ಟಾಗಬಹುದು ಎನ್ನುವುದು ಊಹೆಗೂ ನಿಲುಕದ್ದು.
ಮೂಲ ಯೋಜನೆ:
ನೀರಾವರಿ ಇಲಾಖೆಯ ನಿವೃತ್ತ ಅಧಿಕಾರಿ ಜಿ.ಎಸ್.ಪರಮಶಿವಯ್ಯ ಅವರ “ಟೋಪೋಶೀಟ್ ಯೋಜನೆ”ಯೇ ನೇತ್ರಾವತಿ ತಿರುವು ಯೋಜನೆ. ಪ್ರತಿವರ್ಷ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ೨೭೦ ಟಿಎಂಸಿ ನೀರನ್ನು ಶಾಶ್ವತ ಬರಪೀಡಿತ ಪ್ರದೇಶಗಳಿಗೆ ಹರಿಸುವುದು ಯೋಜನೆಯ ಉದ್ದೇಶ. ಇದರಲ್ಲಿ ಹಾಸನ, ತುಮಕೂರು, ಚಿಕ್ಕಮಗಳೂರು, ಕೋಲಾರ, ಚಿತ್ರದುರ್ಗ ಸೇರಿದಂತೆ ಒಂಬತ್ತು ಜಿಲ್ಲೆಗಳು ಸೇರುತ್ತವೆ. ಅಂದಿನ ಸಂಸದರಾಗಿದ್ದ ಜಿ.ಎಸ್.ಬಸವರಾಜು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರದಿಂದ ಎಸ್.ಎಂ.ಕೃಷ್ಣ ಸರ್ಕಾರದ ಮೇಲೆ ಒತ್ತಡ ತಂದು ಯೋಜನೆ ಅಧ್ಯಯನಕ್ಕೆ ಹಣ ಮಂಜೂರು ಮಾಡಿಸಿದರು. ಈ ಅವಾಸ್ತವ ಯೋಜನೆಗೆ ಎಲ್ಲೆಡೆ ಅಪಸ್ವರ ವ್ಯಕ್ತವಾದಾಗ, ರೂಪುಗೊಂಡದ್ದೇ ಎತ್ತಿನಹೊಳೆ ಯೋಜನೆ.
ನೇತ್ರಾವತಿಯ ಉಪನದಿಯಾದ ಎತ್ತಿನಹೊಳೆಗೆ ಶಿರಾಡಿ ಘಟ್ಟ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಿ ಸುಮಾರು ೮ ಟಿಎಂಸಿ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸಬಹುದು ಎನ್ನುವುದು ಯೋಜನೆಯ ತಿರುಳು. ಇದಕ್ಕೆ ಜನವಿರೋಧ ವ್ಯಕ್ತವಾಗಬಹುದು ಎಂಬ ಮುನ್ಸೂಚನೆಯಿಂದ ಆರಂಭದಿಂದಲೇ ಇದನ್ನು ಕುಡಿಯುವ ನೀರಿನ ಯೋಜನೆ ಎಂದು ಬಿಂಬಿಸಲಾಯಿತು. ಜಲಸಂಪನ್ಮೂಲ ಇಲಾಖೆ ಯೋಜನೆಯ ಸಾಧ್ಯಾಸಾಧ್ಯತೆ ಪರಿಶೀಲಿಸಲು ಸಮೀಕ್ಷೆ ನಡೆಸಿ ವರದಿ ನೀಡುವ ಮುನ್ನವೇ ರಾಜ್ಯ ಸರ್ಕಾರ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ೧೯೭೩ರಲ್ಲಿ ಪರಮಶಿವಯ್ಯ ಈ ಬಗ್ಗೆ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು. ಯೋಜನೆಯ ಏಳು ಹಂತಗಳಲ್ಲಿ ಕೊನೆಯ ಹಂತವೇ ಎತ್ತಿನಹೊಳೆ ಯೋಜನೆ. ಯಡಿಯೂರಪ್ಪ ಸರ್ಕಾರ ಇದಕ್ಕೆ ಅನುಮತಿ ನೀಡಿದ್ದಲ್ಲದೇ, ಅಧ್ಯಯನಕ್ಕೆ ಪೂರಕ ಹಣವನ್ನು ಸದಾನಂದ ಗೌಡ ಮತ್ತು ಶೆಟ್ಟರ್ ಸರ್ಕಾರ ನೀಡಿದವು. ಇದೀಗ ಇಂಥ ಬೃಹತ್ ಯೋಜನೆ ಅನುಷ್ಠಾನಕ್ಕೆ ಸಿದ್ಧರಾಮಯ್ಯ ಸರ್ಕಾರ ಮುಂದಾಗಿದೆ. ಕಿರು ಜಲಾಶಯ ನಿರ್ಮಿಸಿ ಎತ್ತಿನಹೊಳೆಯಿಂದ ೨೪ ಟಿಎಂಸಿ ನೀರು ಸಂಗ್ರಹಿಸಿ, ೮೫೦ ಮೀಟರ್ ಎತ್ತರಕ್ಕೆ ಪಂಪ್‌ಮಾಡಿ ಅಲ್ಲಿಂದ ೨೩೩ ಕಿಲೋಮೀಟರ್ ದೂರದ ತುಮಕೂರಿಗೆ ಕಾಲುವೆ ಮೂಲಕ ಹರಿಸಲಾಗುತ್ತದೆ. ದೇವರಾಯನದುರ್ಗ ಬಳಿ ೧೦ ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಿಸಿ, ಅದಕ್ಕೆ ನೀರು ಪಂಪ್ ಮಾಡಲಾಗುತ್ತದೆ. ನಂತರ ೬೦ ಕಿಲೋಮೀಟರ್ ದೂರದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ೩೩೭ ಕೆರೆಗಳಿಗೆ ಹರಿಸಲಾಗುತ್ತದೆ. ಭವಿಷ್ಯದಲ್ಲಿ ಇಷ್ಟೊಂದು ಪ್ರಮಾಣದ ನೀರನ್ನು ಪಂಪ್ ಮಾಡಲು ಎಷ್ಟು ವಿದ್ಯುತ್ ಬೇಕು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದ ರಾಜಕಾರಣಿಗಳು, ಇನ್ನೇನು ನೀರು ಹರಿದೇಬಿಟ್ಟಿತು ಎಂಬ ವಾತಾವರಣ ಸೃಷ್ಟಿಸಿದ್ದಾರೆ.
ಬರ ಪರಿಸ್ಥಿತಿಗೆ ಏನು ಕಾರಣ?
ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಅವರ ಸಮಸ್ಯೆ ಬಗ್ಗೆ ಎಲ್ಲರಿಗೂ ಸಹಾನುಭೂತಿ ಇದೆ. ಈ ಭಾಗದ ದಾಹ ಇಂಗಿಸಲು ನೀರು ಕೊಡಿ ಎನ್ನುವುದಷ್ಟೇ ಅವರ ಆಗ್ರಹ. ಯೋಜನೆಯ ಪೂರ್ವಾಪರ ಅಥವಾ ವಾಸ್ತವಿಕತೆಯ ಅರಿವಿಲ್ಲದೇ ನಮಗೆ ನೀರು ಕೊಡಿ ಎಂದಷ್ಟೇ ಕೇಳುವುದರಲ್ಲಿ ಯಾವ ಅರ್ಥವಿದೆ?
ಸುಮಾರು ೫೦ ವರ್ಷ ಹಿಂದಿನ ಅಂಕಿ ಅಂಶ ತೆಗೆದರೆ ಈ ಭಾಗದಲ್ಲೂ ಸಾಕಷ್ಟು ನೀರಿತ್ತು. ಕೆರೆ ಕಟ್ಟೆಗಳು ಪ್ರತಿ ಮಳೆಗಾಲದಲ್ಲಿ ತುಂಬಿಕೊಳ್ಳುತ್ತಿದ್ದವು. ಆದರೆ ಭೂಗರ್ಭಕ್ಕೆ ಕನ್ನಹಾಕುವ ಕೊಳವೆಬಾವಿ ತಂತ್ರಜ್ಞಾನ ಜನಪ್ರಿಯವಾದದ್ದೇ ಇಂದಿನ ಈ ದುಃಸ್ಥಿತಿಗೆ ಕಾರಣ. ಪ್ರಕೃತಿಯ ಮೇಲಿನ ನಿರಂತರ ಅತ್ಯಾಚಾರದಿಂದಾಗಿ ಭೂಮಿತಾಯಿ ಇಲ್ಲಿ ಬಂಜೆಯಾಗಿದ್ದಾಳೆ. ಗಣಿಗಾರಿಕೆ ಹೆಸರಲ್ಲಿ ಕಾಡು ನಾಶವಾಗಿದೆ. ಅಭಿವೃದ್ಧಿ ಹೆಸರಲ್ಲಿ ಪ್ರಕೃತಿಯ ಶೋಷಣೆ ನಡೆದಿದೆ. ಈ ಭಾಗದ ಜನ ಏನು ಬೆಳೆದರೂ ಬೆಳೆಯುತ್ತಿರುವ ಬೆಂಗಳೂರು ಎಂಬ ಬಕಾಸುರನ ಹೊಟ್ಟೆ ತುಂಬಿಸಲು ಸಾಧ್ಯವಾಗಲಿಲ್ಲ. ಜಲಮೂಲಗಳು ನಾಶವಾದವು. ನಗರೀಕರಣಕ್ಕೆ ಕೆರೆ- ಕಟ್ಟೆಗಳು ಬಲಿಯಾದವು. ಹೆಚ್ಚುತ್ತಿರುವ ನೀರಿನ ಬೇಡಿಕೆಗಾಗಿ ಅಂತರ್ಜಲಕ್ಕೆ ಕನ್ನ ಹಾಕುವ ದಂಧೆ ಆರಂಭವಾಯಿತು. ಕಡಿಮೆ ನೀರು ಬೇಡುವ ಬೆಳೆಗಳ ಬದಲು ಹೆಚ್ಚು ಲಾಭ ತರುವ ವಾಣಿಜ್ಯ ಬೆಳೆಗಳ ಬಗ್ಗೆ ದೃಷ್ಟಿ ಹರಿಯಿತು. ಒಂದೆಡೆ ಮಾನವ ನಿರ್ಮಿತ ಸಂಪತ್ತು ಹೆಚ್ಚುತ್ತಾ ಹೋದರೆ, ಇನ್ನೊಂದೆಡೆ ಪ್ರಕೃತಿ ನಿರ್ಮಿತ ಖಜಾನೆ ಬರಿದಾಗುತ್ತಾ ಬಂತು. ಇದು ಈ ಜಿಲ್ಲೆಗಳ ಇಂದಿನ ದುಃಸ್ಥಿತಿಗೆ ಮುಖ್ಯ ಕಾರಣ. ಬೆಳೆಯುತ್ತಿದ್ದ ಬೆಂಗಳೂರಿಗೆ ಕಪ್ಪುಕಲ್ಲು ಸಾಗಿಸುವ ದಂಧೆ ಅವ್ಯಾಹತವಾಗಿ ಬೆಳೆಯಿತು. ಕಲ್ಲಿನಿಂದ ಜಿನುಗುವ ಒಸರು ಮಾಯವಾಯಿತು. ನದಿಗಳು ಬರಿದಾದವು. ನದಿಪಾತ್ರಗಳ ಮರಳು ಬರಿದಾಯಿತು. ರೈತರ ಜಮೀನಿನಿಂದ ಮಣ್ಣು ತೆಗೆದು ಅದರಿಂದ ಮರಳು ಉತ್ಪತ್ತಿ ಮಾಡುವ ದಂಧೆ ಬೆಳೆಯಿತು. ಹೀಗೆ ದುರಾಸೆ ಅವಸಾನಕ್ಕೆ ನಾಂದಿಯಾಯಿತು. ಇಂದು ಹನಿನೀರಿಗೂ ಹಾಹಾಕಾರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಎತ್ತಿನಹೊಳೆ ಯೋಜನೆ ಇದಕ್ಕೆ ಪರಿಹಾರ ಸೂಚಿಸುವ ಕನಸು ಹುಟ್ಟುಹಾಕಿದೆ.
ವಾಸ್ತವ ಏನು?
ಆದರೆ ಎತ್ತಿನಹೊಳೆ ಯೋಜನೆಯ ವಾಸ್ತವ ಚಿತ್ರಣವೇ ಬೇರೆ. ಪರಿಸರ ಚಕ್ರವನ್ನೇ ಸರ್ವನಾಶ ಮಾಡುವ ಹುನ್ನಾರ ಇದು. ಜೆಸಿಬಿ, ಕ್ರೇನ್, ಹಿಟಾಚಿ ಬಳಸಿ, ಉಪಗ್ರಹ ತಂತ್ರಜ್ಞಾನ, ಕಂಪ್ಯೂಟರ್‌ಗಳ ಸಹಾಯದಿಂದ ಮಾಡುವ ಸೂಕ್ಷ್ಮಾತಿಸೂಕ್ಷ್ಮ ಲೆಕ್ಕಾಚಾರಗಳನ್ನು ಬಳಸಿ ನದಿನೀರನ್ನು ಹಿಮ್ಮುಖವಾಗಿ ಹರಿಸುವ ವ್ಯರ್ಥ ಪ್ರಯತ್ನ. ತಂತ್ರಜ್ಞಾನದ ಅಹಂಕಾರ ಪ್ರಾಕೃತಿಕ ಅತ್ಯಾಚಾರಕ್ಕೆ ಮುಂದಾಗಿದೆ. ಪ್ರಕೃತಿಗೆ ವಿರುದ್ಧವಾದ ಯಾವ ಯೋಜನೆಗಳೂ ಫಲಕಾರಿಯಾಗಲಾರವು ಎಂಬ ಸತ್ಯ ಅರಿವಿಗೆ ಬರುತ್ತಿಲ್ಲ. ಇಂಥ ಯೋಜನೆ ಗುತ್ತಿಗೆದಾರರ ಜೇಬು ತುಂಬಿಸಬಲ್ಲದೇ ವಿನಃ ಜನರ ದಾಹ ಇಂಗಿಸದು ಎನ್ನುವುದು ವಾಸ್ತವ. ಈ ಜಿಲ್ಲೆಗಳಲ್ಲಿ ಬರಿದಾಗಿರುವ ೪೮೭೯ ಕೆರೆಗಳಿಗೆ ನೀರು ತುಂಬಿಸಲು ಕನಿಷ್ಠ ೮೪.೯೩ ಟಿಎಂಸಿ ನೀರು ಬೇಕು. ಎತ್ತಿನಹೊಳೆಯಿಂದ ೨೪ ಟಿಎಂಸಿ ಹರಿದರೂ ಉಳಿದ ನೀರು ಎಲ್ಲಿಂದ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಈ ಜಿಲ್ಲೆಗಳ ೧೧೦೬ ಗ್ರಾಮಗಳಲ್ಲಿ ಕೆರೆಗಳೇ ಇಲ್ಲ.
ಪರಿಸರಕ್ಕೆ ಹಾನಿ:
ಎಲ್ಲಕ್ಕಿಂತ ಹೆಚ್ಚಾಗಿ ಇದು ಪರಿಸರದ ಮೇಲೆ ಬೀರುವ ಪರಿಣಾಮವೂ ಘೋರ. ನೀರು ಸಾಗಿ ಬರುವ ಹಾದಿ ಮಲೆನಾಡಿನ ನಿತ್ಯ ಹರಿದ್ವರ್ಣದ ಕಾಡು. ಅಲ್ಲೆಲ್ಲ ಕಾಮಗಾರಿ ನಡೆಯುವುದರಿಂದ ಹಸಿರು ನಾಶವಾಗುತ್ತದೆ. ಪಶ್ಚಿಮಘಟ್ಟದಲ್ಲಿ ಯಾವುದೇ ಬೃಹತ್ ಯೋಜನೆ ಹಮ್ಮಿಕೊಳ್ಳಬಾರದು ಎಂದು ಕಸ್ತೂರಿ ರಂಗನ್ ವರದಿ ಹೇಳಿದ್ದು, ಅದನ್ನು ಸರ್ಕಾರ ಒಪ್ಪಿಕೊಂಡಿದೆ. ಆದರೂ ಇಂಥ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಿರುವುದು ದ್ವಂದ್ವನೀತಿಗೆ ಉದಾಹರಣೆ.
ಪಶ್ಚಿಮಘಟ್ಟ ಏಷ್ಯಾದಲ್ಲೇ ಅತ್ಯಂತ ಪ್ರಶಸ್ತ ಜೀವವೈವಿಧ್ಯ ತಾಣ. ಇದಕ್ಕೆ ಸಹ್ಯಾದ್ರಿ ಪರ್ವತ ಎಂಬ ಹೆಸರೂ ಇದೆ. ವಿಶ್ವದ ಅತ್ಯುನ್ನತ ಜೀವವೈವಿಧ್ಯ ನೆಲೆಯಾಗಿರುವ ಪಶ್ಚಿಮಘಟ್ಟದಲ್ಲಿ ೫ ಸಾವಿರ ತಳಿಯ ಗಿಡಮರಗಳಿವೆ. ೧೩೯ ಬಗೆಯ ಸಸ್ತನಿಗಳು, ೫೦೮ ವಿಧದ ಪಕ್ಷಿಸಂಕುಲ, ೧೭೯ ಪ್ರಕಾರದ ದ್ವಿಚರಿಗಳ ಬೆಲೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ೩೨೬ ತಳಿಗಳು ಈ ಪ್ರದೇಶದಲ್ಲಿವೆ. ಬಂಗಾಳಕೊಲ್ಲಿ ಸೇರುವ ತಾಮ್ರಪರ್ಣಿ, ಗೋದಾವರಿ, ಕೃಷ್ಣಾ, ಕಾವೇರಿ, ಪಶ್ಚಿಮಾಭಿಮುಖವಾಗಿ ಹರಿಯುವ ಮಾಂಡವಿ, ಜವಾರಿ, ಶರಾವತಿ, ನೇತ್ರಾವತಿದಂಥ ನದಿಗಳ ಉಗಮಸ್ಥಾನ. ಹಲವು ಜಲವಿದ್ಯುತ್ ಯೋಜನೆಗಳ ನೆಲೆ. ಆಕರ್ಷಕ ಜಲಪಾತಗಳ ಖಣಿ.
ದಟ್ಟ ಕಾಡುಗಳಿಂದ ಕೂಡಿದ ದುರ್ಗಮ ಪ್ರದೇಶದಲ್ಲಿ ಮೊದಲು ಕೃಷಿ ಚಟುವಟಿಕೆ ಇರಲಿಲ್ಲ. ಆದರೆ ಬ್ರಿಟಿಷರ ಆಗಮನದ ನಂತರ ವಾಣಿಜ್ಯ ಬೆಳೆಗಳಿಗಾಗಿ ಕಾಡು ಕಡಿದು ಇಡೀ ಪ್ರದೇಶ ಬದಲಾಯಿತು. ಪಶ್ಚಿಮಘಟ್ಟ ಭಾರತಕ್ಕೆ ನಿಸರ್ಗದತ್ತವಾಗಿ ಬಂದಿರುವ ವರದಾನ. ಅದು ವಿಶ್ವದ ಆಸ್ತಿ. ಈ ಪರಿಸರ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ.
ನೀರಿಗಾಗಿ ಶಾಶ್ವತ ಬರಪೀಡಿತ ಪ್ರದೇಶಗಳ ಜನರ ಮತ್ತು ಕರಾವಳಿ ಜನರ ನಡುವೆ ಯುದ್ಧ ಪರಿಸ್ಥಿತಿ ಹುಟ್ಟುಹಾಕಿರುವುದೇ ಇದುವರೆಗಿನ ಸಾಧನೆ. ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಜನಾಂದೋಲನ ರೂಪುಗೊಂಡಿದೆ. ಯೋಜನೆಯ ಸಂಭಾವ್ಯ ಫಲಾನುಭವಿ ಜಿಲ್ಲೆಗಳಲ್ಲೂ ಒಮ್ಮತ ಇಲ್ಲ. ವಾಸ್ತವದ ಅರಿವು ಇರುವ ಹಲವು ಮಂದಿ ಮುಖಂಡರು ಮತ್ತು ತಜ್ಞರು ಯೋಜನೆ ವಿರೋಧಿಸಿದ್ದಾರೆ.
ಪರ್ಯಾಯ ಮಾರ್ಗ:
ಇಂಥ ಬೃಹತ್ ಯೋಜನೆ ಪೂರ್ಣಗೊಳ್ಳಲು ದಶಕಗಳೇ ಬೇಕು. ಅದಕ್ಕೆ ಅಗತ್ಯವಾದ ಸಂಪನ್ಮೂಲ ಕ್ರೋಢೀಕರಣ ಕೂಡಾ ಸವಾಲಿನ ಕೆಲಸ. ಪ್ರಾಕೃತಿಕ ಹರಿವಿಗೆ ವಿರುದ್ಧವಾಗಿ ನದಿ ಅಥವಾ ತೊರೆ ಹರಿಸುವುದರಿಂದ ಯಾವ ದುಷ್ಪರಿಣಾಮವಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅದಾಗ್ಯೂ ರಾಜಕೀಯ ಲಾಭದ ದುರುದ್ದೇಶದಿಂದ ಈ ಅವಾಸ್ತವಿಕ ಯೋಜನೆಗೆ ಸರ್ಕಾರ ಮುಂದಾಗಿದೆ. ನಮ್ಮ ಬದುಕುವ ಹಕ್ಕಿಗೆ ದಕ್ಷಿಣ ಕನ್ನಡ ಜನತೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಮನೋಭಾವವನ್ನು ಈ ನಾಲ್ಕು ಫಲಾನುಭವಿ ಜಿಲ್ಲೆಗಳ ಜನರಲ್ಲಿ ಮೂಡಿಸುವಲ್ಲಿ ರಾಜಕಾರಣಿಗಳು ಯಶಸ್ವಿಯಾಗಿದ್ದಾರೆ. ಈ ಎಲ್ಲ ಹಿನ್ನೆಲೆಯಿಂದ ನೋಡಿದಾಗ ಎತ್ತಿನಹೊಳೆ ಯೋಜನೆ ಖಂಡಿತಾ ವರದಾನವಾಗದು; ಎಲ್ಲರ ಪಾಲಿಗೆ ಶಾಪ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಇದರ ಬದಲಾಗಿ ಮಳೆನೀರು ಕೊಯ್ಲಿನಂಥ ವಿಧಾನಗಳ ಮೂಲಕ ಸ್ಥಳೀಯ ಅಗತ್ಯ ಪೂರೈಸಿಕೊಳ್ಳುವ ಚಿಂತನೆ ನಡೆಸಬೇಕು.
ಈ ನಾಲ್ಕು ಜಿಲ್ಲೆಗಳಲ್ಲಿ ಸಮಗ್ರ ಮಳೆನೀರು ಕೊಯ್ಲು ಯೋಜನೆ ಅನುಷ್ಠಾನಗೊಳಿಸಿದ್ದೇ ಆದರೆ ಎತ್ತಿನಹೊಳೆಯಿಂದ ಪಡೆಯುವ ನೀರಿನ ಹತ್ತುಪಟ್ಟು ನೀರು ಪಡೆಯಬಹುದು ಎನ್ನುತ್ತಾರೆ ಸುರತ್ಕಲ್ ಎನ್‌ಐಟಿಕೆ ನೀರಾವರಿ ತಜ್ಞ ಎಸ್.ಜಿ.ಮಯ್ಯ ಹೇಳುತ್ತಾರೆ. ಜನರ ಸಹಭಾಗಿತ್ವದಲ್ಲಿ ಜಲಾಯನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೆ ಅಲ್ಲಿನ ನೀರಿನ ಸಮಸ್ಯೆಯನ್ನು ಖಂಡಿತಾ ಬಗೆಹರಿಸಬಹುದು. ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಮರುಭೂಮಿಯನ್ನೇ ಹಸಿರುಗೊಳಿಸಿದ ಯಶಸ್ವಿ ಮಾದರಿಗಳು ಇರುವಾಗ ನಮ್ಮ ರಾಜಕಾರಣಿಗಳು ಇನ್ನೂ ಬೃಹತ್ ಯೋಜನೆಗಳ ಹಿಂದೆ ಏಕೆ ಬಿದ್ದಿದ್ದಾರೆ ಎನ್ನುವುದೇ ಯಕ್ಷಪ್ರಶ್ನೆ.
- ಉದಯಶಂಕರ ಭಟ್